ಅಭಿಪ್ರಾಯ / ಸಲಹೆಗಳು

ಜಿಲ್ಲಾ ಪೊಲೀಸ್‌ ಇತಿಹಾಸ

      ಕೊಡಗನ್ನು ಸುಮಾರು ೨೦೦ ವರ್ಷಗಳ ಕಾಲ ಆಳಿದ ಹಾಲೇರಿ ವಂಶದ ರಾಜರ ಕಾಲದಲ್ಲಿ ಜಾರಿಯಲ್ಲಿದ್ದ  ಆಡಳಿತದ ಸಂದರ್ಭದಲ್ಲಿ ಯಾವುದೇ ಪೊಲೀಸ್‌ ವ್ಯವಸ್ಥೆಯ ಅವಶ್ಯಕತೆ ಇರಲಿಲ್ಲವಾದ್ದರಿಂದ ಯಾವುದೇ ಸಂಘಟಿತ ಪೊಲೀಸ್‌ ವ್ಯವಸ್ಥೆ ಇರಲಿಲ್ಲ. ಬದಲಾಗಿ ಸರ್ಕಾರದ ವಿವಿಧ ಇಲಾಖೆಗಳಲ್ಲಿನ ಮತ್ತು ಕಾವಲು ಮನೆಗಳಲ್ಲಿನ ಜವಾನರು ಎಲ್ಲಾ ಪೊಲೀಸ್‌ ಕರ್ತವ್ಯಗಳನ್ನು ನಿಭಾಯಿಸುತ್ತಿದ್ದರು. ಆಗಿನ ಮಲಬಾರಿನ (ಕೇರಳ) ನಾಯರ್‌ಗಳಂತೆ ಪ್ರತಿಯೊಬ್ಬ ರೈತನೂ ಸೈನಿಕನಾಗಿ ಪೊಲೀಸ್‌ ಕೆಲಸಗಳನ್ನು ನಿರ್ವಹಿಸುತ್ತಿದ್ದರು. ಇದು ಸರ್ವಕಾರ್ಯಕಾರರು, ಕಾರ್ಯಕಾರರು, ಸುಬೇದಾರ್ ಮತ್ತು ಜಮೇದಾರ್ ಎಂಬ ವ್ಯವಸ್ಥೆಯನ್ನೊಳಗೊಂಡಿತ್ತು.

 

       ೧೮೩೪ರಲ್ಲಿ ಬ್ರಿಟಿಷರು ಕೊಡಗನ್ನು ತಮ್ಮ ವಶಕ್ಕೆ ತೆಗೆದುಕೊಂಡ ನಂತರವೂ ಪೊಲೀಸ್‌ ಆಡಳಿತವು ಹಳೆಯ ರೀತಿಯಲ್ಲಿಯೇ ಮುಂದುವರೆದಿತ್ತು. ಕೊಡಗನ್ನು ಬ್ರಿಟಿಷರು ವಶಕ್ಕೆ ತೆಗೆದುಕೊಂಡ ೪೦ ವರ್ಷಗಳ ನಂತರ ಮಡಿಕೇರಿ ಮತ್ತು ವಿರಾಜಪೇಟೆ ಪಟ್ಟಣಗಳಲ್ಲಿ ೨೬ ಸಿಬ್ಬಂದಿಗಳನ್ನೊಳಗೊಂಡ ಪೊಲೀಸ್‌ ವ್ಯವಸ್ಥೆಯು ಜಾರಿಗೆ ಬಂತು. ಈ ವ್ಯವಸ್ಥೆಯು ದಫೇದಾರ್‌ ಮತ್ತು ಜವಾನ ಎಂಬ ಹಂತಗಳನ್ನೊಳಗೊಂಡಿತ್ತು. ಗ್ರಾಮೀಣ ಪ್ರದೇಶಗಳಲ್ಲಿ ಸುಬೇದಾರ್‌, ಪಾರುಪತ್ತೆಗಾರರು ಮತ್ತು ಪಟೇಲರು ಎಂಬ ವ್ಯವಸ್ಥೆಯಲ್ಲಿ ಗ್ರಾಮ ಪೊಲೀಸ್‌ ಬಲವು ಕಾರ್ಯಾಚರಿಸುತ್ತಿತ್ತು.

 

      ದಿನಾಂಕ ೩೦/೦೮/೧೮೩೪ ರಲ್ಲಿ ಕೊಡಗಿನ ಚೀಫ್‌ ಕಮೀಷನರ್‌ ಆಗಿದ್ದ ಲೆಫ್ಟಿನೆಂಟ್‌ ಕರ್ನಲ್‌ ಜೆ.ಎಸ್.ಫ್ರೇಸರ್‌ ಕೊಡಗಿನ ಆಡಳಿತಕ್ಕೆ ಸಂಬಂಧಿಸಿದಂತೆ ಕಾಯ್ದೆ ಮತ್ತು ನಿಯಮಗಳನ್ನು ಪ್ರಥಮ ಬಾರಿಗೆ ಜಾರಿಗೆ ತಂದನು. ತದನಂತರ ೧೮೬೧ ರ ಭಾರತ ದಂಡ ಸಂಹಿತೆ ಮತ್ತು ೧೮೬೨ರ ದಂಡ ಪ್ರಕ್ರಿಯಾ ಸಂಹಿತೆಯ ಜಾರಿಯೊಂದಿಗೆ ಲೆ.ಕ. ಜೆ.ಎಸ್.ಫ್ರೇಸರನ ಈ ನಿಯಮಾವಳಿಗಳು ನಿರಸನಗೊಂಡವು.

 

      ನಂತರದ ವರ್ಷಗಳಲ್ಲಿ ಕೊಡಗಿನ ಚೀಫ್‌ ಕಮೀಷನರ್‌ ಆಗಿದ್ದವರೇ ಕೊಡಗಿನ ಪದನಿಮಿತ್ತ ಪೊಲೀಸ್‌ ಮಹಾ ನಿರೀಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಕೊಡಗಿನ ನಿಜವಾದ ಪೊಲೀಸ್‌ ಬಲವು ಆಗಿನ ಮದ್ರಾಸು ಸರ್ಕಾರದ ಕೇಡರಿಗೆ ಸೇರಿದ ಸಹಾಯಕ ಪೊಲೀಸ್‌ ಅಧೀಕ್ಷಕ ಹುದ್ದೆಯ ಯುರೋಪಿಯನ್‌ ಅಧಿಕಾರಿಯ ಅಧೀನದಲ್ಲಿ ಕರ್ತವ್ಯ ನಿರ್ವಹಿಸುತ್ತಿತ್ತು. ಕ್ಯಾಪ್ಟನ್‌ ಸಿ.ಎಫ್.‌ ಲೀ ಹಾರ್ಡಿ ಎಂಬ ಅಧಿಕಾರಿಯು ೦೨/೦೯/೧೮೩೪ರಲ್ಲಿ ಕೊಡಗಿನ ಪ್ರಥಮ ಸೂಪರಿಂಟೆಂಡೆಂಟ್‌ ಆಫ್‌ ಕೂರ್ಗ್‌ ಆಗಿ ಅಧಿಕಾರವನ್ನು ವಹಿಸಿಕೊಂಡನು. ನಂತರ ೦೨/೦೧/೧೯೨೨ರಲ್ಲಿ ಈ ಸಹಾಯಕ ಪೊಲೀಸ್‌ ಅಧೀಕ್ಷಕ ಹುದ್ದೆಯು ಭಾರತೀಕರಣಗೊಂಡಿತು. ೧೯೨೪ರಲ್ಲಿ ಕೊಡಗಿನ ಪೊಲೀಸ್‌ ಇಲಾಖೆಯ ಉಸ್ತುವಾರಿಗಾಗಿ ಒಂದು ಪೊಲೀಸ್‌ ಉಪ ಅಧೀಕ್ಷಕ (ಡಿವೈಎಸ್‌ಪಿ) ಹುದ್ದೆಯನ್ನು ಸೃಜಿಸಲಾಯಿತು ಹಾಗೂ ಕೊಡಗಿನ ಜಿಲ್ಲಾ ಮ್ಯಾಜಸ್ಟ್ರೇಟರನ್ನು ಪದ ನಿಮಿತ್ತ ಜಿಲ್ಲಾ ಪೊಲೀಸ್‌ ಅಧೀಕ್ಷಕರಾಗಿ ನಿಯೋಜಿಸಲಾಗಿತ್ತು.

 

      ೧೯೩೪ರಲ್ಲಿ ಕೊಡಗಿನ ಪೊಲೀಸ್‌ ಉಪ ಅಧೀಕ್ಷಕ ಹುದ್ದೆಯನ್ನು ಮೇಲ್ದರ್ಜೆಗೇರಿಸಿ ಜಿಲ್ಲಾ ಪೊಲೀಸ್‌ ಅಧೀಕ್ಷಕ ಹುದ್ದೆಯನ್ನು ಸೃಜಿಸಲಾಯಿತು. ೧೯೫೪ರಲ್ಲಿ ಪುನಃ ಒಂದು ಉಪ ಪೊಲೀಸ್‌ ಅಧೀಕ್ಷಕ ಹುದ್ದೆಯನ್ನು ಸೃಜಿಸಲಾಯಿತು. ಕೊಡಗು ಜಿಲ್ಲೆಯ ಪೊಲೀಸ್‌ ವ್ಯವಸ್ಥೆಯನ್ನು ಮಡಿಕೇರಿ, ವಿರಾಜಪೇಟೆ ಮತ್ತು ಸೋಮವಾರಪೇಟೆ ಎಂಬ ಮೂರು ಪೊಲೀಸ್‌ ವೃತ್ತಗಳಾಗಿ ವಿಂಗಡಿಸಲಾಗಿತ್ತು. ಈ ವೃತ್ತಗಳ ಅಧೀನದಲ್ಲಿ ೧೦ ಪೊಲೀಸ್‌ ಠಾಣೆಗಳು ಮತ್ತು ೧೩ ಪೊಲೀಸ್‌ ಉಪ ಠಾಣೆಗಳು ಕಾರ್ಯಾಚರಿಸುತ್ತಿದ್ದವು. ಇವುಗಳ ಜೊತೆಗೆ ಜಿಲ್ಲಾ ಸಶಸ್ತ್ರ ದಳ (ಡಿಎಆರ್)‌, ಜಿಲ್ಲಾ ವಿಶೇಷ ಘಟಕ ಮತ್ತು ಜಿಲ್ಲಾ ಗುಪ್ತವಾರ್ತೆ ವಿಭಾಗಗಳು ಕಾರ್ಯಾಚರಿಸುತ್ತಿದ್ದವು.

 

      ಪ್ರಸ್ತುತ ಕೊಡಗು ಜಿಲ್ಲೆಯಲ್ಲಿ ಮೂರು ಪೊಲೀಸ್‌ ಉಪ ವಿಭಾಗಗಳು, ೭ ವೃತ್ತಗಳು, ೨೦ ಪೊಲೀಸ್‌ ಠಾಣೆಗಳು, ೧೭ ಉಪ ಠಾಣೆಗಳು ಸೇರಿದಂತೆ ಜಿಲ್ಲಾ ವಿಶೇಷ ಘಟಕ, ಜಿಲ್ಲಾ ಅಪರಾಧ ದಾಖಲೆಗಳ ಅಭಿಲೇಖಾಲಯ, ಜಿಲ್ಲಾ ವೈಜ್ಞಾನಿಕ ನೆರವು ಘಟಕ, ಜಿಲ್ಲಾ ಅಪರಾಧ ಗುಪ್ತವಾರ್ತೆ ಘಟಕ, ಜಿಲ್ಲಾ ಪೊಲೀಸ್‌ ಗಣಕ ವಿಭಾಗಗಳ ಜೊತೆಗೆ ಡಿಎಆರ್‌, ಪೊಲೀಸ್‌ ನಿಸ್ತಂತು ಕೇಂದ್ರ, ಶ್ವಾನದಳಗಳು ಕಾರ್ಯಾಚರಿಸುತ್ತಿವೆ.

ಇತ್ತೀಚಿನ ನವೀಕರಣ​ : 22-10-2020 02:04 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕೊಡಗು ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080